ಮಧ್ಯಾಂತರ ಶಿಲೆಗಳು -
ಭೂಮಿಯಲ್ಲಿ ಕಾಣಬರುವ ಶಿಲಾಪ್ರಕಾರಗಳ ಪೈಕಿ ಒಂದು (ಹೈಪೊಬೈಸಾಲ್ ರಾಕ್ಸ್). ಜ್ವಾಲಾಮುಖಿಜ (ವಾಲ್ಕೇನಿಕ್) ಶಿಲೆಗಳು ಮತ್ತು ಅಂತರಾಗ್ನಿ (ಪ್ಲೂಟೋನಿಕ್) ಶಿಲೆಗಳು ಇತರ ಪ್ರಕಾರದವು. ಇವು ಭೂಮಿಯಲ್ಲಿ ದೊರೆಯುವ ರೀತಿಯನ್ನು ಅನುಸರಿಸಿ ಈ ವರ್ಗೀಕರಣ ಮಾಡಿದೆ. ಕೆಲವೊಮ್ಮೆ ಶಿಲಾವಿಜ್ಞಾನಿಗಳು ಶಿಲೆಗಳನ್ನು ಎರಡನೆಯ ಮತ್ತು ಮೂರನೆಯ ವಿಧಗಳಲ್ಲಿ ಮಾತ್ರ ವಿಂಗಡಿಸುವುದಿದೆ. ಆದರೆ ಬಹುತೇಕವಾಗಿ ಮಧ್ಯಾಂತರ ಶಿಲಾಪ್ರಕಾರವನ್ನೂ ಗುರುತಿಸುತ್ತಾರೆ. ಇವು ಭೂಮಿಯ ಮೇಲ್ಪದರದ ಭಾಗಗಳಲ್ಲಿ ವಿವಿಧ ರೂಪಗಳಲ್ಲಿ ಕಂಡುಬರುತ್ತವೆ. ಇವುಗಳ ವೈವಿಧ್ಯ ಆ ಪ್ರದೇಶದಲ್ಲಿಯ ಭೌತಗುಣ ಮತ್ತು ಶಿಲಾರಸ ಒಳನುಗ್ಗುವ ಕ್ರಿಯೆಯ ತೀವ್ರತೆಯನ್ನು ಅವಲಂಬಿಸಿದೆ. ಇಂಥ ಸನ್ನಿವೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ರೂಪಗಳಿವು: 1 ಬ್ಯಾತೊಲಿತ್, ಬಾಸ್, ಸ್ಟಾಕ್ : 2 ಡೈಕ್: 3 ಸಿಲ್: 4 ಲ್ಯಾಕೊಲಿತ್.

ಬ್ಯಾತೊಲಿತ್ ಬಾಸ್ ಮತ್ತು ಸ್ಟಾಕ್: ಅತ್ಯಧಿಕ ಮೊತ್ತದ ಶಿಲಾರಸ ಭೂಪದರದೊಳಕ್ಕೆ ನುಗ್ಗಿ. ಅಲ್ಲಿಯ ಶಿಲೆಗಳನ್ನು ಭೇದಿಸಿ ಸಾಗುತ್ತ ಹಾಗೂ ಕರಗಿಸುತ್ತ ಸಾಕಷ್ಟು ಮೊತ್ತವನ್ನು ಕಬಳಿಸುತ್ತ ವಿಶಾಲಸ್ಥಳವನ್ನು ಆಕ್ರಮಿಸಿಕೊಳ್ಳುತ್ತದೆ. ಈ ಕ್ರಿಯೆಯಲ್ಲಿ ಬೇರು ಅತಿ ಆಳದವರೆಗೂ ಇಳಿದು ಘನೀಭವಿಸಿ ಶಿಲೆಯಾಗಿ ಮಾರ್ಪಡುತ್ತದೆ. ಇದಕ್ಕೆ ಬ್ಯಾತೊಲಿತ್ ಎಂದು ಹೆಸರು. ಇದರ ರಚನೆಗೆ ಕಾರಣವಾದ ಶಿಲಾರಸ ಭೂಮಿಯ ಮೇಲ್ಮ್ಯೆವರೆಗೇನೂ ನುಗ್ಗುವುದಿಲ್ಲ. ಬೇರೆಬೇರೆ ಕಾರಣಗಳಿಂದ ಭೂಮಿಯ ಮೇಲ್ಮೈ ಸವೆತಕ್ಕೆ ಈಡಾಗಿ ಅದರ ಅಳದಲ್ಲಿ ರೂಪುಗೊಂಡ ಬ್ಯಾತೊಲಿತ್‍ಗಳ ಮೇಲ್ಭಾಗ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ಗೋಳಾಕಾರದಲ್ಲಿರುವುದು. ಪಾಶ್ರ್ವಗಳು ಕೆಳಕ್ಕೆ ಹೋದಂತೆಲ್ಲ ವಿಸ್ತರಿಸುತ್ತವೆ. ಬ್ಯಾತೊಲಿತ್‍ನ ಮೇಲ್ಮೈ ಅನೇಕ ವೇಳೆ ನಯವಾಗಿರುವುದಿಲ್ಲ. ಗುಪ್ಪೆಗುಪ್ಪೆಯಂಥ ಕವಲುಗಳು ಮೇಲೇಳುವುದೂ ಉಂಟು. ಪ್ರಧಾನ ಬ್ಯಾತೊಲಿತ್‍ನ ಮೇಲ್ಮೈಯಿಂದ ಮೇಲೆ ಹೊರಟ ಅಂಥ ಕೆಲವು ಕವಲುಗಳು ಮಾತ್ರ ಭೂಮಿಯ ಮೇಲೆ ಮೊದಲೆ ಕಾಣಿಸಿಕೊಳ್ಳುತ್ತವೆ. ಹೀಗೆ ಕಾಣಿಸಿಕೊಂಡ, ಸುಮಾರು 100 ಚಕಿಮೀ ವಿಸ್ತೀರ್ಣದ ಒಳಗೇ ಇರುವ ವರ್ತುಳೀಯ ಶಿಲಾರೂಪಕ್ಕೆ ಬಾಸ್ ಎಂದು ಹೆಸರು. ಅನಿರ್ದಿಷ್ಟ ಆಕಾರದ ಬಾಸ್‍ಗಳಿಗೆ ಸ್ಟಾಕ್ ಎಂಬ ಹೆಸರುಂಟು. ಸಾಮಾನ್ಯವಾಗಿ ದೊರೆಯುವ ಶಿಲೆಗಳು ಬ್ಯಾತೊಲಿತ್, ಬಾಸ್, ಸ್ಟಾಕ್‍ಗಳ ರೂಪದಲ್ಲಿ ಇರುವ ಗ್ರಾನೈಟ್ ಶಿಲೆಯಾಗಿಯೋ ಅದಕ್ಕೆ ಸಮೀಪ ಸಂಬಂಧದ ಶಿಲೆಯಾಗಿಯೋ ಇರುತ್ತವೆ.

	ಡೈಕ್: ಶಿಲಾರಸ ಹೆಚ್ಚುಕಡಿಮೆ ನೇರವಾಗಿ ಭೂಮಿಯ ಒಳನುಗ್ಗಿ, ಅಡ್ಡ ಬರುವ ಶಿಲೆಗಳ ಪದರವನ್ನಾಗಲಿ ರಚನೆಯನ್ನಾಗಲಿ ಛೇದಿಸಿ ಶಿಲಾರೂಪ ಹೊಂದಿದಾಗ ಅಂಥ ಸ್ಥಿತಿಯಲ್ಲಿಯ ಶಿಲಾರಸಕ್ಕೆ ಡೈಕ್ ಎಂದು ಹೆಸರು. ಇದು ಉದ್ದವಾಗಿ ವ್ಯಾಪಿಸಿರುತ್ತದೆ. ಪಾಶ್ರ್ವಗಳು ಸಮಾಂತರವಾಗಿರುತ್ತವೆ. ದಪ್ಪವು ಕೆಲವೇ ಸೆಂಮೀನಿಂದ ನೂರಾರು ಮೀಟರ್‍ವರೆಗೂ ಉದ್ದವು ಕೆಲವು ಮೀಗಳಿಂದ ಅನೇಕ ಕಿಮೀವರೆಗೂ ಇರುವುವು. ಡಾಲರೈಟ್ ಎಂಬ ಕರಿಶಿಲೆ ವಿಶೇಷವಾಗಿ ಡೈಕ್ ರೂಪದಲ್ಲೇ ದೊರೆಯುವುದು. ಕೆಲವು ಪ್ರದೇಶಗಳಲ್ಲಿ ಇಂಥ ಡೈಕ್‍ಗಳ ಸಮೂಹವನ್ನೇ ಕಾಣಬಹುದು. ಒಂದೇ ಕೇಂದ್ರ ಸ್ಥಾನದಿಂದ ಪ್ರಾರಂಭವಾಗಿ ಅನೇಕ ದಿಶೆಗಳಲ್ಲಿ ವ್ಯಾಪಿಸುವ ಡೈಕ್‍ಗಳಿಗೆ ಅರೀಯ(ರೇಡಿಯಲ್) ಡೈಕ್‍ಗಳೆಂದೂ ವರ್ತುಳಾಕಾರದವುಗಳಿಗೆ ವರ್ತುಳೀಯ ಡೈಕ್‍ಗಳೆಂದೂ ಹೆಸರು.

	ಸಿಲ್: ಭೂಮೇಲುಪದರದ ಶಿಲೆಗಳು ಪದರ ರೂಪದಲ್ಲಿದ್ದಾಗ, ಅವುಗಳೊಳಕ್ಕೆ ಶಿಲಾರಸ ನುಗ್ಗಿ ಘನೀಭವಿಸಿದಾಗ ಮೂಡುವ ರೂಪ. ಸಿಲ್‍ಗಳ ದಪ್ಪ ಸಾಮಾನ್ಯವಾಗಿ ಒಂದೆರೆಡು ಸೆಂಮೀನಿಂದ ನೂರಾರು ಮೀಟರುವರೆಗೂ, ವಿಸ್ತೀರ್ಣ 1ಚಮೀನಿಂದ ಅನೇಕ ಚಕಿಮೀ ವರೆಗೂ ಇರುತ್ತವೆ.

	ಲ್ಯೊಕೊಲಿತ್: ಒಳಪದರಕ್ಕೆ ನುಗ್ಗಿದ ಶಿಲಾರಸ ಆರಿದಂತೆಲ್ಲ, ಜಿಗುಟುತನ ಹೆಚ್ಚಾಗಿ ಮುಂದೆ ಹರಿಯಲಾರದೆ, ಪ್ರವೇಶದ್ವಾರದ ಸುತ್ತ ಶೇಖರವಾಗಿ ಮೇಲಿನ ಶಿಲಾ ಪದರಗಳನ್ನು ಮೇಲಕ್ಕೆ ಒತ್ತಿ ಬನ್ನಿನ ಆಕಾರದ ಶಿಲಾರೂಪ ತಾಳುತ್ತದೆ.
(ಆರ್.ಎನ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ